ಪಾಶ್ಚುರೀಕರಣ 
ಪಾನೀಯ ಅಥವಾ ದ್ರವಾಹಾರ ಪದಾರ್ಥದ ರುಚಿಯನ್ನು ಕೆಡಿಸದಂತೆ ಅದನ್ನು ಕ್ಲುಪ್ತಕಾಲ ಮಂದ ಉಷ್ಣಸಂಸ್ಕರಣ ಕ್ರಿಯೆಗೆ ಒಳಪಡಿಸಿ ಅದರಲ್ಲಿರುವ ರೋಗಕಾರಕ ಹಾಗೂ ರುಚಿಗೆಡಿಸುವ ಅನೇಕ ಜೀವಾಣುಗಳನ್ನು ಸಾಯಿಸಿ ಪದಾರ್ಥದ ಉಪಯೋಗಾವಧಿಯನ್ನು ವೃದ್ಧಿಗೊಳಿಸುವ ವಿಧಾನ (ಪಾಶ್ಚುರೈಸೇಷನ್). ಪಾನೀಯ ಹಾಗೂ ದ್ರವಾಹಾರಗಳನ್ನು ಈ ವಿಧಾನದಿಂದ ಸಂರಕ್ಷಿಸುವ ಕ್ರಮವನ್ನು ಲೂಯಿ ಪಾಸ್ಚರ್ 1860ರಲ್ಲಿ ಮೊದಲು ಜಾರಿಗೆ ತಂದನಾದ್ದರಿಂದ ಇದಕ್ಕೆ ಪಾಶ್ಚುರೈಸೇಷನ್ (ಪಾಶ್ಚುರೀಕರಣ) ಎಂದು ಹೆಸರಿಡಲಾಯಿತು. ಅನೈಚ್ಛಿಕವಾಗಿ ಹುದುಗೆಬ್ಬಿಸಿ ಹುಳಿ ಬರಿಸಿ ರುಚಿಗೆಡಿಸುವ ಇಲ್ಲವೇ ಅನಾರೋಗ್ಯಕ್ಕೆ ಕಾರಣವಾಗಬಹುದಾದ ಏಕಾಣುಗಳ ನಿರ್ಮೂಲನವೇ ಪಾಶ್ಚುರೀಕರಣದ ಉದ್ದೇಶ. 

ವೈನ್, ಬೀರ್ ಮುಂತಾದ ಮಾದಕ ಪಾನೀಯಗಳನ್ನು 57.2(ಅ ಉಷúತೆಯ ಮಟ್ಟಕ್ಕೆ ಕೆಲವೇ ಮಿನಿಟುಗಳ ಕಾಲ ಕಾಸಿ ಶೀಘ್ರವಾಗಿ ಅರಿಸಿ ಸ್ವಚ್ಚವಾದ ಶೀಶೆಗಳಲ್ಲಿ ತುಂಬಿ ಮೊಹರು ಮಾಡಿಟ್ಟರೆ, ಅವು ಅನಂತರ ಅತಿರೇಕವಾಗಿ ಹುದುಗೆದ್ದು ಹುಳಿಯಾಗಿ ಕೆಟ್ಟು ಹೋಗುವುದನ್ನು ಚಿರಕಾಲ ತಪ್ಪಿಸಬಹುದೆಂದು ಪ್ರಯೋಗದ ಮೂಲಕ ಪಾಸ್ತರ್ ತೋರಿಸಿದ. ಇದರಿಂದ ಫ್ರಾನ್ಸಿನಲ್ಲಿ ಮಾದಕ ಪಾನೀಯಗಳ ಕೈಗಾರಿಕೆಗಳು ದೃಢತಳಹದಿಯ ಮೇಲೆ ನಿಲ್ಲುವಂತಾಯಿತು. ಹಾಲನ್ನು ಹೀಗೆ ಸಂಸ್ಕರಿಸಿ ವಿಷಾಣುರಹಿತವನ್ನಾಗಿ ಮಾಡುವುದಕ್ಕೆ ಪಾಸ್ತರ್ ವಿಧಿಸಿದ ಕ್ರಮ ಹೀಗಿದೆ : ದೇಹೋಷ್ಣತೆಗೂ (37.5(ಅ) ನೀರು ಕುದಿಯುವ ಉಷ್ಣತೆಗೂ (100(ಅ) ಸುಮಾರು ಮಧ್ಯಮಟ್ಟಕ್ಕೆ (65(-70(ಅ) ಹಾಲನ್ನು ಕಾಸಿ ಸುಮಾರು ಅರ್ಧ ಗಂಟೆ ಅದೇ ಉಷúತೆಯಲ್ಲಿ ಇಟ್ಟಿದ್ದು ಅನಂತರ ಚಟ್ಟನೆ ಸುಮಾರು 15(ಅ ಮಟ್ಟಕ್ಕೆ ಆರಿಸಿ ಕೂಡಲೇ ಸ್ವಚ್ಚವಾದ ಶೀಶೆಗೆ ತುಂಬಿ ಮುಚ್ಚಿ ಮೊಹರು ಮಾಡತಕ್ಕದ್ದು. ಹೀಗೆ ಸಂಸ್ಕರಿಸಿದ್ದರಿಂದ ಹಾಲಿನ ರುಚಿ, ಬಣ್ಣ, ರೂಪ ಮತ್ತು ಪೋಷಕಗಳು ಕೆಡವು. ಆದರೆ ಸಿ ಜೀವಸತ್ವ ಮಾತ್ರ ಸ್ವಲ್ಪಮಟ್ಟಿಗೆ ನಾಶವಾಗುತ್ತದೆ. 60(ಅ ಉಷúತೆಯಲ್ಲಿ 20 ಮಿನಿಟುಗಳ ಕಾಲ ಇಟ್ಟಿದ್ದರೆ ಹಾಲಿನಲ್ಲಿ ಇರಬಹುದಾದ ಅನೇಕ ವಿಷಾಣುಗಳು (ಕ್ಷಯ, ವಿಷಮ ಜ್ವರ, ಆಮಶಂಕೆ, ಗಂಟಲುಮಾರಿ (ಡಿಫ್ತೀರಿಯ), ಕೆಂಜ್ವರ, (ಸ್ಕಾರ್ಲೆಟ್ ಫೀವರ್,) ಗಂಟಲ ಉರಿಯೂತ, ಬಾಯಿ ಪಾದರೋಗ ಮುಂತಾದವುಗಳ ಕಾರಕಗಳು) ನಾಶವಾಗುತ್ತವೆ. ಸಾಮಾನ್ಯವಾಗಿ ಬೀಜಕಣವಾಗದ (ನಾನ್-ಸ್ಟೋರ್ ಬೇರಿಂಗ್) ವಿಷಾಣುಗಳೆಲ್ಲ ಹಾಲನ್ನು ಪಾಶ್ಚುರೀಕರಿಸಿದಾಗ ಸತ್ತು ಹೋಗುತ್ತವೆನ್ನಬಹುದು. ಆದರೆ ಎಲ್ಲ ಬಗೆಯ ಏಕಾಣುಗಳೂ ನಾಶವಾಗುವುದಿಲ್ಲ. ಏಕಾಣುಗಳ ಬೀಜಕಣಗಳಂತೂ (ಸ್ಟೋರ್ಸ್) ಉಳಿದೇ ಇರುತ್ತವೆ. ಪಾತ್ರೆಯ ಬಾಯಿಯನ್ನು ತೆರೆದೇ ಇಟ್ಟಿದ್ದರೆ ಪಾಶ್ಚುರೀಕರಣದ ಹಾಲು ಹಸಿಹಾಲಿನಷ್ಟು ಬೇಗ ಹುಳಿಯಾಗದು. ಈ ಹಾಲಿನ ಮೊಸರು ಮೆದುವಾಗಿರುವುದಲ್ಲದೆ ಚೆನ್ನಾಗಿ ಅರಗುವಂತೆಯೂ ಇರುವುದು. ಇಲ್ಲಿ ಗಮನಿಸಬೇಕಾದ ವಿಷಯ ಹಾಲನ್ನು ಉಕ್ಕು ಬರುವಷ್ಟು ಕಾಸದೇ ಇರುವುದು. ಮಿತಿಮೀರಿ ಕಾಸಿದರೆ ಬೆಣ್ಣೆ ಸುಲಭವಾಗಿ ದೊರೆಯದಂತಾಗುತ್ತದೆ.

ಹಾಲನ್ನು ಪಾಶ್ಚುರೀಕರಿಸುವಾಗ 60(-70(ಅ ಉಷúತೆಯಲ್ಲಿ ಅದನ್ನು ಸುಮಾರು ಅರ್ಧ ಗಂಟೆ ಇಟ್ಟಿದ್ದ ಮೇಲೆ ಅದು ನಿಧಾನವಾಗಿ ತಣ್ಣಗಾಗುವಂತೆ ಪಾತ್ರೆಯ ಬಾಯಿ ತೆರೆದಿಟ್ಟಿದ್ದರೆ ಪ್ರಯೋಜನವಾಗದು. ಏಕೆಂದರೆ ವಾತಾವರಣದಲ್ಲಿ ಸರ್ವವ್ಯಾಪಿಯಾಗಿ ಇರುವ ಏಕಾಣುಗಳು ಆ ಕಾಲದಲ್ಲಿ ಪುನಃ ಹಾಲನ್ನು ಸೇರಬಹುದು. ಹೀಗಾಗಿ ಮುಂದೆ ಅದನ್ನು ಬಳಸಿದಾಗ ಲಭ್ಯವಾಗಬಹುದಾಗಿದ್ದ ಅನುಕೂಲತೆ ಇಲ್ಲವಾಗುತ್ತದೆ. ಪಾಶ್ಚುರೀಕರಣದ ಲಾಭ ದೊರೆಯಬೇಕಾದರೆ ನಿರ್ದಿಷ್ಟ ಕಾಲ, ನಿರ್ದಿಷ್ಟ ಉಷ್ಣತೆಗೆ ಒಳಪಡಿಸಿದ ಹಾಲನ್ನು ಚಟ್ಟನೆ ಆರಿಸಿ, ಶುಭ್ರಗೊಳಿಸಿದ ಶೀಶೆಗೆ ತುಂಬಿ ಮೊಹರು ಮಾಡುವುದು ಅಗತ್ಯ. ಹಾಗೆಯೇ ಮೊಹರು ಒಡೆದ ಅನತಿ ಕಾಲದಲ್ಲಿ ಹಾಲನ್ನೆಲ್ಲ ಬಳಸಿಬಿಡಬೇಕಾದುದೂ ಅಗತ್ಯ. ಏಕೆಂದರೆ ಪಾಶ್ಚುರೀಕರಣದಿಂದ ಲ್ಯಾಕ್ಟೋಬ್ಯಾಸಿಲ್ಲಸ್ ಎಂಬ ಏಕಾಣುಗಳು ಕೂಡ ನಾಶವಾಗಿಬಿಟ್ಟಿರುತ್ತವೆ. ಈ ಏಕಾಣುಗಳಿಗೆ ವಿಷಜನಕ ಏಕಾಣುಗಳ ವೃದ್ಧಿಯನ್ನು ತಡೆಯುವ ಸ್ವಭಾವ ಉಂಟು. ಪಾಶ್ಚುರೀಕರಿಸಿದ ಹಾಲನ್ನು ಅನತಿ ಕಾಲದಲ್ಲಿ ಬಳಸದೆ ಪಾತ್ರೆಯ ಬಾಯಿಯನ್ನು ಹಲವು ಗಂಟೆಗಳ ಕಾಲ ತೆರೆದಿಟ್ಟಿದ್ದರೆ ವಿಷಜನಕ ಏಕಾಣುಗಳು ಅದರಲ್ಲಿ ವೃದ್ಧಿಗೊಂಡು ಅಂಥ ಹಾಲು ಪಾಶ್ಚುರೀಕರಿಸಿದ ಹಾಲಿಗಿಂತಲೂ ಅಪಾಯಕಾರಿಯಾಗಿರುತ್ತದೆ. 

ಹಾಲಿನಲ್ಲಿರುವ ರೋಗಾಣುಗಳನ್ನು ಸಾಯಿಸಲು, ಉಷúತೆಯ ಮಟ್ಟ ಮತ್ತು ಅವಧಿಗಳು ಮುಖ್ಯ. ಕಾಯಿದೆ ಪ್ರಕಾರ ಹಾಲನ್ನು ನಿರ್ದಿಷ್ಟ ಉಷ್ಣತೆಯಲ್ಲಿ ನಿರ್ದಿಷ್ಟ ಕಾಲದತನಕ ಕಾಸಿ ಅನಂತರ ಚಟ್ಟನೆ ಆರಿಸಿ ಶುಭ್ರ ಶೀಶೆಯೊಳಗೆ ಹಾಕಿ ಮೊಹರು ಮಾಡಿದ್ದಕ್ಕೆ ಮಾತ್ರ ಪಾಶ್ಚುರೀಕರಿಸಿದ ಹಾಲು ಎನ್ನಬೇಕು. ಪಾಶ್ಚುರೀಕರಣ ಕ್ರಮಬದ್ಧವಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸಲು ನಿರ್ದಿಷ್ಟ ಪ್ರಯೋಗವನ್ನು ವಿಧಿಸಲಾಗಿದೆ. ಇದರಲ್ಲಿ ಸಾಮಾನ್ಯವಾಗಿ ಹಸಿ ಹಾಲಿನಲ್ಲಿರುವ ಫಾಸ್ಛಟೇಸ್ ಎಂಬ ಕಿಣ್ವ, ಪಾಶ್ಚುರೀಕರಿಸಿದ್ದೆಂದು ಹೇಳಲಾದ ಹಾಲಿನಲ್ಲಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಲಾಗುತ್ತದೆ. ಪಾಶ್ಚುರೀಕರಣ ಕ್ರಮಬದ್ಧವಾಗಿದ್ದರೆ ಆ ಹಾಲಿನಲ್ಲಿ ಫಾಸ್ಛಟೇಸ್ ಸ್ವಲ್ಪವೂ ಇರುವುದಿಲ್ಲ. ಏಕೆಂದರೆ 60(ಅ ಉಷ್ಣತೆಗೆ ಅರ್ಧ ಗಂಟೆ ಕಾಲ ಒಡ್ಡಿದ್ದೇ ಆದರೆ ಫಾಸ್ಛಟೇಸ್ ಕಿಣ್ವ ಪೂರ್ಣವಾಗಿ ನಾಶವಾಗುತ್ತದೆ.

ಅಮೆರಿಕ ಸಂಯುಕ್ತ ಸಂಸ್ಥಾನಗಳ ಜನಾರೋಗ್ಯಸೇವೆಯ ಹಾಲಿನ ಕಾಯಿದೆ ಕಲಮಿನಲ್ಲಿ ನಮೂದಿಸಿರುವಂತೆ ಪಾಶ್ಚುರೀಕರಣ ಎಂದರೆ ಹಾಲು. ಹಾಲಿನ ವಸ್ತುಗಳ ಒಂದೊಂದು ಕಣವನ್ನೂ ಅಂಗೀಕರಿಸಿದ ಸರಿಯಾದ ಸಲಕರಣೆಯಲ್ಲಿ ಕೊನೆಯ ಪಕ್ಷ 61.7(ಅ ಉಷúತೆಯ ಮಟ್ಟಕ್ಕೆ ಏರಿಸಿ ಅರೆ ತಾಸಾದರೂ ಅದೇ ಮಟ್ಟದಲ್ಲಿ ಹಿಡಿದಿಟ್ಟಿರುವುದು (ಇಳಿಗಾವಿನಲ್ಲಿ ಹಿಡಿದಿಟ್ಟಿರುವ ವಿಧಾನ), ಇಲ್ಲವೇ ಕೊನೆ ಪಕ್ಷ 71.7(ಅ ಉಷúತೆಯ ಮಟ್ಟಕ್ಕೆ ಕಾಸಿ 15 ಸೆಕೆಂಡುಗಳಾದರೂ ಇಟ್ಟಿರುವುದು (ಏರುಗಾವಿನ ತುಸುಹೊತ್ತಿನ ವಿಧಾನ) ಎಂದಿದೆ. ಉಷúತೆಯ ಕನಿಷ್ಠ ಮಟ್ಟಗಳನ್ನೂ ಆ ಮಟ್ಟದಲ್ಲಿ ಎಷ್ಟು ಹೊತ್ತು ಹಿಡಿದಿಟ್ಟಿರಬೇಕು ಎಂಬ ಕಾಲಾವಧಿಯನ್ನೂ ಕ್ಷಯ ರೋಗಾಣು ಉಷ್ಣತೆಗೆ ಜಗ್ಗದಿರುವ ಪರೀಕ್ಷೆಗಳಿಂದ ನಿರ್ಧರಿಸಿದೆ. ಏಕೆಂದರೆ ಮಾನವರಲ್ಲಿ ರೋಗ ಉಂಟುಮಾಡಬಹುದಾದಂಥ (ಹಾಗೂ ಬೀಜಕಣವಾಗದ) ಸೂಕ್ಷ್ಮ ಜೀವಾಣುಗಳಲ್ಲಿ ಉಷ್ಣಕ್ಕೆ ಸುಲಭವಾಗಿ ಜಗ್ಗದವು ಎಂದರೆ ಕ್ಷಯ ರೋಗಾಣುಗಳೇ.

ಪಾಶ್ಚುರೀಕರಣ ಪದವನ್ನು ಕೆಲವು ಗಟ್ಟಿ ಆಹಾರ ಪದಾರ್ಥಗಳ ಸಂಸ್ಕರಣೆಗೂ ಬಳಸುವುದುಂಟು. ಆದರೆ ಇಲ್ಲಿ ಉಷúತೆಯ ಮಟ್ಟ ಇಂತಿಷ್ಟೇ ಎಂದು ಖಚಿತವಾಗಿ ಹೇಳುವುದು ಕಠಿಣ. ಕಾರಣ ಒಂದೊಂದು ಆಹಾರದ ಭೌತಸ್ವರೂಪ ಒಂದೊಂದು ವಿಧವಾಗಿರುವುದು.

ಶುದ್ಧ ನೀರಿನ ಪೂರೈಕೆಯನ್ನು ಬಿಟ್ಟರೆ ಜನಾರೋಗ್ಯದ ನಿಟ್ಟಿನಿಂದ ಹಾಲಿನ ಪಾಶ್ಚುರೀಕರಣ ಬಲುಮುಖ್ಯ. ದನಗಳ ಹಸಿಹಾಲಿನ ಮೂಲಕ ಮಾನವನಿಗೆ ಬರಬಹುದಾದ ಅನೇಕ ರೋಗಗಳ ಕಾರಕಗಳನ್ನು ಇದು ಸಾಯಿಸುವುದು, ಮುಖ್ಯವಾಗಿ ಹಾಲಿನಲ್ಲಿರುವ ಕ್ಷಯರೋಗಳನ್ನು ನಾಶಮಾಡುವುದೇ ಹಾಲಿನ ಪಾಶ್ಚುರೀಕರಣದ ಉದ್ದೇಶ. ಪಾಶ್ಚುರೀಕರಣ ಎಂದರೆ ಮುನ್ನೆಚ್ಚರಿಕೆ ಕಾಪುರೋಗದ ತಡೆ. ಸೋಂಕು ಹತ್ತಿದ ಹಾಲನ್ನು (ಸಾಮಾನ್ಯವಾಗಿ ಹಸಿಹಾಲು ಸೋಂಕು ಹತ್ತಿಯೇ ಇರುತ್ತದೆ.) ಬಳಕೆಗೆ ಯೋಗ್ಯವಾಗಿಸಲು ಪಾಶ್ಚುರೀಕರಣ ತೀರಾ ಸರಳ. ಹಾಗೆಂದು ತೀರಾ ಕೆಟ್ಟ ಹಾಲನ್ನು ಪಾಶ್ಚುರೀಕರಣದಿಂದ ಕುಡಿಯಲು ಯೋಗ್ಯವಾಗುವಂತೆ ಮಾಡಲು ಸಾಧ್ಯವಿಲ್ಲ. ಅಂಥ ಹಾಲನ್ನು ಕಾಸುವುದಕ್ಕೆ ಪ್ರಾರಂಭಿಸಿದ ಕೆಲವು ಕ್ಷಣಗಳಲ್ಲೆ ಅದು ಒಡೆದು ಹೋಗುವುದು. ನೀರು ಬೆರೆಸಿದ, ಕೊಳಕಿನ ತಂಗಳು ಹಾಲನ್ನು ಪಾಶ್ಚುರೀಕರಿಸಿದರೆ ಹಾಲು ಎಂದಿಗೂ ಒಳ್ಳೆಯದಾಗದು. ಹಸಿಯ ಹಾಲನ್ನು ಕುಡಿಯುವುದರಿಂದ ಒದಗುವ ಅನೇಕ ಅಪಾಯಗಳನ್ನು ಪಾಶ್ಚುರೀಕರಣ ತಪ್ಪಿಸುತ್ತದೆ.

ಪಾಶ್ಚುರೀಕರಣ ವಿಧಾನಗಳೆಂದು ಬಳಕೆಯಲ್ಲಿರುವವು ಏಳು. 1 ಚುರುಕಿನ ವಿಧಾನ : ಸುಮಾರು 70(ಅ ಉಷ್ಣತೆಗೆ ಏರಿಸಿ ಸರಕ್ಕನೆ ನೀರ್ಗಲ್ಲಿನ ತಂಪಿಗೆ ಇಳಿಸುವುದು, ಆವಿಯಿಂದ ಕಾದ ಕೊಳವೆಯ ಮೇಲೆ ಬಿದ್ದ ಹಾಲು ಕೂಡಲೆ ನೀರ್ಗಲ್ಲು ತಂಪಿನ ತಟ್ಟೆಯ ಮೇಲೆ ಬೀಳುವುದು. ಆದರೆ ಹೊತ್ತೂ ಕಾವೂ ಇಲ್ಲಿ ನಿರ್ಧಾರವಿಲ್ಲ. ಆದರಿಂದ ಈ ವಿಧಾನ ಒಳ್ಳೆಯದಲ್ಲ ಮತ್ತು ವಿಶ್ವಾಸಾರ್ಹವಾದುದಲ್ಲ.

2 ಏರು ಕಾವು ತುಸುಹೊತ್ತಿನ ವಿಧಾನ : ವಿದ್ಯುತ್ತಿನಿಂದ ಕಾದ ಸುರುಳಿಯ ಮೂಲಕ ಹಾಲನ್ನು ಸುಲಭವಾಗಿ ಹರಿಸಿ ಪಾಶ್ಚುರೀಕರಿಸುವುದು.

3 ಇಳಿಗಾವಿನಲ್ಲಿ ಹಿಡಿದಿರುವ ವಿಧಾನ : ಏರಿದ ಕಾವಿಗೇರಿಸಿ ಒಂದೆಡೆ ಅರೆತಾಸಿನ ಹೊತ್ತು ಪಾತ್ರೆಯಲ್ಲಿ ಹಿಡಿದಿಟ್ಟಿರುವುದು. ಇದು ಬಲು ಖಚಿತವಾದ ಸಾಮಾನ್ಯ ಬಳಕೆಯ ವಿಧಾನ.

4 ಒಂದೇ ಸಮನೆ ಹರಿಸುವ ವಿಧಾನ : ಹಾಲನ್ನು ಮೊದಲು ಸುಮಾರು 60(ಅ ಉಷ್ಣತೆಗೆ ಏರಿಸಿ ಅದೇ ಉಷúತೆಯಲ್ಲಿ ಕೊಳವೆಗಳ ಮೂಲಕ ಅರೆತಾಸು ಹರಿಯುವಂತೆ ಮಾಡುವುದು.

5 ಹಾಲಿನ ಶೀಶೆಯಲ್ಲಿ ಪಾಶ್ಚುರೀಕರಿಸುವ ವಿಧಾನ : ಶೀಶೆಗಳಿಗೆ ಚೆನ್ನಾಗಿ ಬಿರಡೆ ಹಾಕಿರಬೇಕು. ಆಮೇಲೆ ಸರಕ್ಕನೆ ತಂಪು ಮಾಡಬೇಕು. ಪಾಶ್ಚುರೀಕರಿಸಿದ ಮೇಲೆ ಬಳಸುವುದರೊಳಗಾಗಿ ಸೋಂಕು ತಾಕದಿರುವುದೇ ಇದರ ಹೆಚ್ಚಿನ ಅನುಕೂಲ.

6 ಆವಿಪಾತ್ರೆಗಳಲ್ಲಿ ಹಾಲಿನ ಶೀಶೆಗಳನ್ನು ಕುದಿಸುವ ವಿಧಾನ.

7 ವಿಕಿರಣ ಪಾಶ್ಚುರೀಕರಣ ವಿಧಾನ : ದ್ರವ ಇಲ್ಲವೇ ಗಟ್ಟಿ ಆಹಾರ ವಸ್ತುಗಳನ್ನು ಕೆಡದಂತಿರಲು ವಿಕಿರಣತೆಯ ಬಳಕೆ ಇದು. ಆಹಾರದ ಗುಣ ಏನೇನೂ ಬದಲಾಗದೆಯೆ ಅದನ್ನು ಕೆಡಿಸುವ ಬಹುಪಾಲು ರೋಗಾಣುಗಳನ್ನು ಸಾಯಿಸುವಷ್ಟು ಮಾತ್ರ ವಿಕಿರಣತೆಗೆ ಒಡ್ಡುವುದು.

	ಮೇಲಿನವೆಲ್ಲವನ್ನೂ ಪಾಶ್ಚುರೀಕರಣ ವಿಧಾನಗಳು ಎಂದಿದ್ದರೂ ಶಾಸ್ತ್ರೀಯವಾಗಿ 1, 2 ಮತ್ತು 7ನೆಯ ವಿಧಾನಗಳನ್ನು ಪಾಶ್ಚುರೀಕರಣವೆಂದು ಗಣಿಸುವಂತಿಲ್ಲ.
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ